ಕೋಪದ ಬಲೆ

ಅಮ್ಮನ ಪ್ರೀತಿಯ ಮಗಳು, ಅಪ್ಪನ ಅಚ್ಚು ಮೆಚ್ಚಿನ ಸುಕುಮಾರಿ. ಹಳ್ಳಿಯ ಜನರಿಗೆಲ್ಲ ಮಾದರಿ ಹೆಣ್ಣು ಮಗಳು. ಅವಳ ಆ ನಯವಾದ ಗುಣ, ಮುಗ್ದತೆಯ ಸ್ವಭಾವ ಎಲ್ಲರ ಪ್ರೀತಿಗೆ ಕಾರಣವಾಗಿತ್ತು. ಎಲ್ಲೋ ಇರುವ ದೂರದ ಹೊಲಕ್ಕೆ ಕಾಲ್ನಡಿಗೆಯಲ್ಲೇ ಊಟದ ಬುತ್ತಿ ಹೊತ್ತು ಮನೆಯವರ ಉಪಚಾರವೇ ತನ್ನ ಕಾಯಕ ಎಂಬಂತೆ ಭಾವಿಸಿ ಬದುಕುತಿದ್ದ ಜೀವವದು. ಮನೆಯವರಿಗೆಲ್ಲ ಮುದ್ದು ಮನೆಮಗಳಾದರು ತನ್ನ ಅಣ್ಣನೊಂದಿಗೆ ಮಾತ್ರ ಶತ್ರುವಿನಂತ ಸಂಬಂಧ. ತನ್ನ ಹತ್ತಿರದ ಸಂಬಂಧಿಕರ ಮಗನನ್ನು ಪ್ರೀತಿಸುತಿದ್ದ ಕಾರಣ, ಅಣ್ಣನಿಗೆ ಅವಳ ಮೇಲೆ ಕೆಂಡದಂತ ಕೋಪ.

          ಕೆಲವು ವರ್ಷಗಳ ನಂತರ ಒಪ್ಪಿಗೆ ಇಲ್ಲದೆ ಮದುವೆ ಮಾಡಿಸಿದ ಅಣ್ಣ, ಆಕೆಯ ಮುಖವನ್ನು ಕೂಡ ನೋಡಲು ಬಯಸದೇ ಮನೆ ಇಂದ ಹೊರಹಾಕಿದ ಪರಿಸ್ಥಿತಿ. ಮದುವೆಗೆ ಯಾವ ಗಟ್ಟಿಮೇಳವು ಇಲ್ಲ, ಮಂತ್ರ ಪಠಣವೂ ಇಲ್ಲ. ನಾಲ್ವರ ಹಿರಿಯರ ಆಶೀರ್ವಾದದೊಂದಿಗೆ ದೇವರ ಸನ್ನಿದಿಯಲ್ಲಿ ಒಂದಾದ ಇಬ್ಬರು ತಮ್ಮ ಜೋಳಿಗೆಯಲ್ಲಿ ದುಃಖ ಸಂಕಟಗಳನ್ನೇ ಕೊಂಡೊಯ್ದು ಮುಂದೆ ಸಾಗಿದರು. ಇತ್ತ ಅಮ್ಮನ ಮನೆಯ ನೆರಳು ಇಲ್ಲದೆ ಅತ್ತ ಗಂಡನ ಮನೆಯವರ ಆಸರೆಯೂ ಸಿಗದೇ, ತನ್ನ ಪತಿಯ ಜೊತೆ ಊರನ್ನೇ ತೊರೆದು ಹೊರನಡೆದಳು, ತನ್ನ ನೋವೆಂಬ ಬುತ್ತಿಯನ್ನು ಕಟ್ಟಿ .

         ಮದುವೆಯಾದ ಕೆಲ ಸಮಯದ ನಂತರ ತವರು ಮನೆಯವರ ಕೋಪ ಕಡಿಮೆ ಆಗಿರಬಹುದು ಎಂದುಕೊಂಡು ಮನೆಗೆ ಬಂದ ಆಕೆಗೆ ಸಿಕ್ಕಿದ ಕೇವಲ ಅವಮಾನ. ಆಕೆಯನ್ನು ಬೀದಿಗೆ ತಳ್ಳಿ ತವರುಮನೆಯ ಬಾಗಿಲು ಶಾಶ್ವತವಾಗಿ ಮುಚ್ಚಿತ್ತು. ನಿಂತು ನೋಡುತಿದ್ದವರ ಭಾವ ಅಸಹಾಯಕತೆ ಇಂದ ತುಂಬಿತ್ತು. ಹುಟ್ಟಿದಾಗಿನಿಂದ ತವರು ಮನೆಯ ದೀಪವಾಗಿ, ಜೀತದಾಳಂತೆ ದುಡಿದು ಎಲ್ಲರ ಯೋಗ ಕ್ಷೇಮಕ್ಕೆ ಕಾರಣಳಾದ ಆಕೆಗೆ ಸಿಕ್ಕಿದು ಇಂತಹ ವಿಷಾದಕರ ಬಹುಮಾನ. ಅಕ್ಕ-ತಂಗಿ, ತಂದೆ-ತಾಯಿ ಎಲ್ಲ ಸಂಬಂಧಗಳನ್ನು ತೊರೆದು ಮಾನಸಿಕವಾಗಿ ನೊಂದಿದ್ದ ಜೀವಕ್ಕೆ ಆಸರೆಯಾಗಿ ನಿಂತಿದ್ದು ಆಕೆಯ ಪತಿ ಮಾತ್ರ .
ಮದುವೆ ಆದ ಎರಡು ವರ್ಷಗಳಿಗೆ ಆ ವಿಧಿಯ ಬಲೆಗೆ ಗುರಿಯಾಗಿದ್ದು ಮನಕಲಕುವ ದೃಶ್ಯ. ತನ್ನ ಜೀವನವನ್ನು ಪ್ರೀತಿಯೆಂಬ ಬಲೆ ಎಣೆದು ಕಟ್ಟಿಕೊಳ್ಳುವ ಆಸೆಯಿಂದ ಬದುಕುತಿದ್ದ ಆ ಸಮಯದಲ್ಲಿ ಯಮನ ಸ್ವರೂಪವಾಗಿ ಬಂದಿದ್ದು ಕ್ಯಾನ್ಸರ್ ಕಾಯಿಲೆ. ಕಾಯಿಲೆಯ ಕಾರಣ ತನ್ನ ಗಂಡನ ಮನೆಸೇರಿದ ಆಕೆಗೆ ಪ್ರೀತಿ ಇರಲಿ ಊಟ ಉಪಚಾರವು ಸಿಗಲಿಲ್ಲ. ಎದುರಲ್ಲೇ ಅಮ್ಮನ ಮನೆ ಇದ್ದರು ಆಕೆಯ ಸಂಕಟದ ಕೂಗು ಯಾರಿಗೂ ಕೇಳಲಿಲ್ಲ. ರೋಗಸ್ಥಳು ಎಂಬ ಕಾರಣಕ್ಕೆ ಮನೆ ಅಲ್ಲೂ ಇರಲು ಬಿಡದೇ ಊರಿಂದ ಹೊರಗಿರುವ ಮನೆಯೊಂದರಲ್ಲಿ ಬಂಧಿ ಆದಳು ಆಕೆ. ಪ್ರತಿದಿನವೂ ಜೀವದ ಜೊತೆ ಬಡಿದಾಡಿ ಬದುಕುತಿದ್ದ ಕಾಲಘಟ್ಟವದು. ಸಾಯುತಿದ್ದ ಆ ಜೀವ, ಪ್ರೀತಿ ಎಂಬ ಮಳೆ ಹನಿಗಾಗಿ ಚಾತಕ ಪಕ್ಷಿಯಂತೆ ಕಾಯುತ್ತಿದ್ದರು ಯಾವ ದೇವಾನು ದೇವತೆಗಳಿಗೂ ಆ ಭಕ್ತೆಯ ಪ್ರಾರ್ಥನೆ ಕೇಳಿಸಲೇ ಇಲ್ಲ.
ಅಂದು ವಿಧಿಸೂಚಿತ ದಿನವಿರಬಹುದು. ತವರುಮನೆಯಲ್ಲಿ ಅಣ್ಣನ ಮದುವೆ ಸಂಭ್ರಮ. ಅತ್ತ ಅವಳ ಜೀವವು ಯಮನ ಜೊತೆ ಸಂಗ್ರಾಮ. ಎರಡು ಹೆಜ್ಜೆ ಇರುವ ಅಮ್ಮನ ಮನೆಗೂ ಕೂಡ ಹೆಜ್ಜೆ ಇಡಲಾರದೆ ಸಂಕಟದಲ್ಲಿ ನರಳಾಡುತಿತ್ತು ಜೀವ. ಮದುವೆ ದಿಬ್ಬಣ ಹೊರಡುವ ಮುನ್ನವೇ ಸೂತಕದ ಸುದ್ದಿ ಕೇಳಬಂತು. ಅದುವೇ ತಂಗಿಯ ದುರ್ಮರಣ. ತನ್ನ ಗಂಡ ಎಷ್ಟೇ ಪ್ರಯತ್ನ ಪಟ್ಟರು ಅವಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಸುದ್ದಿ ಕೇಳಿ ಮನೆಯೇ ಕಣ್ಣೀರಿನಲ್ಲಿ ಮಡುವುಗಟ್ಟಿತ್ತು. ಅಣ್ಣನ ಆಕ್ರಂಧನ ಮುಗಿಲು ಮುಟ್ಟಿತ್ತು. ಎಷ್ಟೇ ವಿರೋಧಿ ಆದರೂ ಸಹೋದರಿ ಎಂಬ ಪ್ರೀತಿ ಕಳೆದುಕೊಳ್ಳಲು ಸಾಧ್ಯವೇ. ಆದರೆ ಆ ಕೋಪವೆಂಬ ಜ್ವಾಲೆಯಿಂದ, ಸತ್ತ ನಂತರವೂ ಆಕೆಯ ಮುಖವನ್ನು ಮನೆಯವರು ಯಾರು ಕೂಡ ನೋಡಲಿಲ್ಲ. ಕೋಪದಿಂದ ಎಲ್ಲರು ಸಾಧಿಸಿದ್ದಾದರೂ ಏನು? ಎಲ್ಲರ ಮನಸ್ಸಿಗೆ ನೋವು ಮಾತ್ರ. ಆ ನೋವಿನಲ್ಲೇ ಮದುವೆಯ ದಿಬ್ಬಣ ಹೊರಟಿತ್ತು. ಅತ್ತ ಆಕೆಯ ಶವ ದಿಬ್ಬಣ. “ಎಂತವರಿಗೂ ಬರಬಾರದು ಇಂತಹ ಕರುಳ ಕುಡಿಯ ನೋವು “ ಎಂದು ಜನರ ಸಂತಾಪ .
ತಾಯಿಯ ವ್ಯಥೆ ಕೇಳುವರಾರು. ಮಗನ ಮದುವೆಯ ಸಂಭ್ರಮವಿಲ್ಲ. ಮಗಳ ಚಿತೆಯ ನೋಡುವ ಸ್ಥಿತಿಯು ಇಲ್ಲ. ಮಗಳು ಬಯಸಿದ್ದು ಕೇವಲ ಅಮ್ಮನ ಮನೆಯ ಪ್ರೀತಿ ಅಷ್ಟೇ. ಆದರೆ ಆ ಆತ್ಮ ತೃಪ್ತಿಯು ಇಲ್ಲದೇ ಲೋಕವನ್ನೇ ತ್ಯಜಿಸಿದಳು ಏಕಾಂಗಿಯಾಗಿ. ದ್ವೇಷದ ಬದಲು ಪ್ರೀತಿಯ ಬುತ್ತಿ ನೀಡಿದರೆ ಎಷ್ಟೋ ಜೀವಗಳು ನೆಮ್ಮದಿ ಇಂದ ಕೊನೆ
ಉಸಿರೆಳೆಯುತ್ತವೆ.

#StoryOfLoveLife #Love and Anger #sister #brother 

Leave a comment